Thursday, March 13, 2008

ಜಿಪುಣ ಗಂಡನಿಗೆ ಲಕ್ಷ ಗುಲಾಬಿ ನೀಡೋ ಶಿಕ್ಷೆ!

ಟೆಹ್ರಾನ್: ಚಿನ್ನಾ ನೀನಿಲ್ದೆ ನಾ ಇರೋದು ಹೇಗೆ ಹೇಳು, ಏಳೇಳು ಜನ್ಮಕ್ಕೂ ನೀನೇ ನನ್ನವಳು ಎಂದು ಹೇಳಬೇಕಾದ ಸಮಯದಲ್ಲಿ ‘ಜಿಪುಣತನ’ ತೋರಿದ ಪತಿರಾಯ ಪಶ್ಚಾತ್ತಾಪ ಪಡ್ತಾ ಇದ್ದಾನೆ. ಜಿಪುಣತನಕ್ಕಾಗಿ ನ್ಯಾಯಾಲಯ ಪತ್ನಿಗೆ ೧ ಲಕ್ಷದ ೨೪ ಸಾವಿರ ಗುಲಾಬಿ ಹೂವುಗಳನ್ನು ನೀಡುವಂತೆ ತೀರ್ಪು ನೀಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಇರಾನ್‌ನಲ್ಲಿರುವ ಕಾನೂನು. ಪತಿರಾಯನಿಗೆ ನೀಡಿದ ವರದಕ್ಷಿಣೆಯನ್ನು ಮದುವೆಯಾದ ನಂತರ ಅಥವಾ ವಿಚ್ಛೇದನ ವೇಳೆ ಪಡೆಯಬಹುದು ಎನ್ನುತ್ತದೆ ಕಾನೂನು. ಶಹೀನ್- ಹೆಂಗಾಮೇಹ್ ದಾಂಪತ್ಯಕ್ಕೆ ೧೦ ವರ್ಷ ಸಂದಿದೆ. ಆದರೆ ಆರಂಭದಲ್ಲೇ ಆಕೆಯೊಡನೆ ಸರಸವಾಡುವುದನ್ನು ಬಿಟ್ಟು ಆತ ತನ್ನ ಜಿಪುಣತನ ತೋರಲಾರಂಭಿಸಿದ. ಇದರಿಂದ ಉಗ್ರಸ್ವರೂಪಿಣಿಯಾದ ಆಕೆ ಕಾಫಿಯ ಹಣ ಕೊಡಲು ಹಿಂಜರಿಯುತ್ತಿದ್ದ ಪತಿ ವರದಕ್ಷಿಣೆಯನ್ನು ಗುಲಾಬಿ ರೂಪದಲ್ಲೇ ಬೇಕೆಂದು ಹಠ ಹಿಡಿದಿದ್ದಳು. ಆದರೆ ನ್ಯಾಯಾಲಯದಲ್ಲೂ ಪತಿರಾಯ ಜಿಪುಣತನ ಬಿಡಲಿಲ್ಲ. ದಿನಕ್ಕೆ ೫ ಗುಲಾಬಿ ಹೂ ನೀಡಲಷ್ಟೇ ಸಾಧ್ಯ ಎಂದಿದ್ದಾನೆ. ನ್ಯಾಯಾಲಯ ೬೪ ಸಾವಿರ ಡಾಲರ್ ಮೊತ್ತದ ಆತನ ಅಪಾರ್ಟ್‌ಮೆಂಟನ್ನು ಸ್ವಾಧೀನ ಪಡಿಸಿದೆ. ಹೆಂಗಾಮೇಹ್ ನಗುವಾ... ಗುಲಾಬಿ ಹೂವೇ... ಎಂದು ಗುಲಾಬಿಗಾಗಿ ಕಾಯುತ್ತಿದ್ದರೆ ಪತಿ ಶಾಹಿನ್‌ಗೆ ಮೈಯೆಲ್ಲಾ ಮುಳ್ಳುತಾಕುತ್ತಿರುವ ಅನುಭವ!

No comments: